ಬಿಲಿಯಡ್ರ್ಸ್

ಬಿಲಿಯರ್ಡ್ಸ್ -ಹೆಚ್ಚಾಗಿ ಶ್ರೀಮಂತರನ್ನೇ ಆಕರ್ಷಿಸಿರುವಂಥ ಒಳಾಂಗಣ ಆಟ. ಇದರ ಆರಂಭದ ಬಗೆಗೆ ಏನೂ ತಿಳಿದು ಬಂದಿಲ್ಲ. ಚಂಡನ್ನು ನೂಕುವುದೇ ಒಂದು ಪ್ರಮುಖ ಅಂಶವಾಗಿದ್ದ ಹಲವಾರು ಆಟಗಳಿಂದ ಬಿಲಿಯಡ್ರ್ಸ್ ರೂಪುಗೊಂಡಿರಬಹುದು. ಎಡ್ಮಂಡ್ ಸ್ಪೆನ್ಸರ್ (1591), ಜಾರ್ಜ್ ಚಾಪ್ ಮನ್ (1598) ಶೇಕ್ಸ್ ಫಿಯರ್ (1607), ಬೆನ್ ಜಾನ್ಸನ್ (1637) ಹಾಗೂ ಸಾಮ್ಯುಯಲ್ ಜಾನ್‍ಸನ್ (1755) ತಮ್ಮ ಕೃತಿಗಳಲ್ಲಿ ಬಿಲಿಯಡ್ರ್ಸ್ ಆಟವನ್ನು ಹೆಸರಿಸಿದ್ದಾರೆ. ಪಾತ್ರಗಳ ಬಾಯಿಯಿಂದ ಹೇಳಿಸಿದ್ದಾರೆ. ಬಿಲಿಯಡ್ರ್ಸ್‍ಗೆ ಬಹಳ ಪುರಾತನ ಹಿನ್ನೆಲೆಯಿದೆ ಎಂಬ ಮಾತಿಗೆ ಪ್ರಾಚೀನ ಈಜಿಪ್ಟರೂ ಗ್ರೀಕರೂ ಇದನ್ನು ತಿಳಿದಿದ್ದರೆಂಬುದು ಪುಷ್ಟಿ ಕೊಡುತ್ತದೆ. ಇಂಗ್ಲೆಂಡ್ ಮತ್ತು ಫ್ರಾನ್ಸುಗಳಲ್ಲಿ 16ನೆಯ ಶತಮಾನದ ಮಧ್ಯ ಭಾಗದಲ್ಲಿ ಬಿಲಿಯಡ್ರ್ಸ್ ಆಡುತ್ತಿದ್ದರು. ಇದಕ್ಕೆ ಆಧುನಿಕ ರೂಪ ಬಂದದ್ದು ಕಳೆದ ಶತಮಾನದಲ್ಲಿ.

	ಬಿಲಿಯಡ್ರ್ಸ್‍ಗೆ ಬೇಕಾದ ಸಲಕರಣೆಗಳು ಮೂರು: ಬಿಲಿಯಡ್ರ್ಸ್ ಮೇಜು, ಚಂಡು, ದಾಂಡು, ಮೇಜಿನ ಉದ್ದ ಅಗಲದ ಎರಡರಷ್ಟಿರಬೇಕು. ಇದರ ಸುತ್ತ ರಬ್ಬರ್ ಹೊಂದಿಸಿರುವ ಕಂಬಿಯ ಬೇಲಿ, ಕೆಳ ಭಾಗಕ್ಕೆ ಸ್ಲೇಟು ಚಪ್ಪಡಿ ಹಾಸಿ ಮೇಲ್ಮೈಗೆ ಹಸಿರು ಫೆಲ್ಟ್ ಹಾಕಿರುತ್ತಾರೆ. ಎರಡು ಬಿಳಿ ಹಾಗೂ ಒಂದು ಕೆಂಪು ಚಂಡು ಇರಬೇಕು. ಇವನ್ನು ದಂತ ಅಥವಾ ಪ್ಲಾಸ್ಟಿಕ್‍ನಿಂದ ಮಾಡಿರುತ್ತಾರೆ. ಬಿಳಿಯ ಎರಡು ಚಂಡುಗಳಲ್ಲಿ ಒಂದಕ್ಕೆ ಚುಕ್ಕೆ ಇರುತ್ತದೆ. ಕ್ಯೂದಂಡ ಆಥವಾ ದಾಂಡು ಸುಮಾರು 150 ಸೆಂಮೀ ಉದ್ದವಿರುತ್ತದೆ. ಹಿಡಿಯುವ ಭಾಗ ದಪ್ಪವಾಗಿದ್ದು ಕ್ರಮೇಣ ತೆಳ್ಳಗಾಗಿದ್ದು ಚಂಡು ನೂಕುವ ತುದಿಗೆ ತೊಗಲು ಅಂಟಿಸಿರುತ್ತಾರೆ. ಈ ತುದಿಗೆ ಸೀಮೆಸುಣ್ಣದ ಪುಡಿ ಸವರಿಕೊಂಡು ಆಟವಾಡಬೇಕು. ಆಗ ಚಂಡನ್ನು ಹೊಡೆಯುವಾಗ ಜಾರುವುದಿಲ್ಲ. ಹಿಡಿಯುವ ಭಾಗಕ್ಕೆ ತೂಕವಾದ ಸೀಸ ಹಾಕಿರುವುದರ ಉದ್ದೇಶ ಸಮತೋಲನವನ್ನು ಕಾಯ್ದುಕೊಳ್ಳುವುದೇ ಆಗಿದೆ. 

	ಬಿಲಿಯಡ್ರ್ಸ್ ಮೇಜು ಆಯಾಕಾರವುಳ್ಳದ್ದು. ಚಂಡು ಹಾಕಲು ಚೀಲ ಇರಬಹುದು ಅಥವಾ ಇಲ್ಲದಿರಬಹುದು. ಮೇಜಿನ ಕೆಳತುದಿಯ ಕಡೆಯಿಂದ ಸುಮಾರು 73 ಸೆಂಮೀ ದೂರದಲ್ಲಿ ಅಗಲಕ್ಕೆ ಸಮಾಂತರವಾಗಿ ಒಂದು ಗೆರೆ, ಇದರ ಮಧ್ಯಕ್ಕೆ ಅರ್ಧ ವರ್ತುಲದ ಗುರುತು ಹಾಕಿರುತ್ತಾರೆ. ಗುರಿ ಚಂಡುಗಳನ್ನು ಇಡಲು ಮೇಜಿನ ಮೇಲೆ ಗುರುತು ಇರುತ್ತದೆ. 

	ಇದು ಇಬ್ಬರು ಆಟ ಆಡುವ ಆಟ. ಲ್ಯಾಗಿಂಗ್ ಮೂಲಕ ಯಾರು ಮೊದಲು ಆಡಬೇಕೆಂಬುದನ್ನು ನಿರ್ಧರಿಸುತ್ತಾರೆ. ಆಟಗಾರರು ಇಬ್ಬರೂ ತಾವು ನಿಂತಿರುವ ಮೇಜಿನ ಭಾಗಕ್ಕೂ ಹೆಡ್‍ಸ್ಟ್ರಿಂಗಿಗೂ ಮಧ್ಯೆ ಚಂಡನ್ನಿಟ್ಟು ದಂಡದಿಂದ ಎದುರು ಭಾಗಕ್ಕೆ ಹೊಡೆಯಬೇಕು. ಚಂಡು ಆ ಭಾಗದ ಕುಷನ್ನಿಗೆ ತಗುಲಿ ಹಿಂದಕ್ಕೆ ಬರುತ್ತದೆ. ಹಾಗೆ ತಿರುಗಿ ಬಂದಾಗ ಯಾರ ಚಂಡು ತನ್ನ ಕಡೆಯ ಹೆಡ್‍ಕುಷನ್ ಹತ್ತಿರ ಬೀಳುತ್ತದೆಯೋ ಆತ ಮೊದಲ ಆಟಗಾರ. ಬೇಕೆನಿಸಿದರೆ ಎದುರಾಳಿಗೆ ಸರದಿ ಬಿಟ್ಟು ಕೊಡಬಹುದು.

	ಪ್ರತಿಯೊಬ್ಬ ಆಟಗಾರನೂ ಕ್ಯೂದಂಡ ಇಟ್ಟುಕೊಳ್ಳುವನು. ಎರಡು ಬಿಳಿ ಚಂಡುಗಳಲ್ಲಿ ಒಂದೊಂದನ್ನು ಒಬ್ಬೊಬ್ಬರು ತೆಗೆದುಕೊಳ್ಳುವರು, ಆಟಗಾರ ಉಪಯೋಗಿಸುವ ಚಂಡಿಗೆ ಕ್ಯೂಚಂಡು ಎಂದು ಹೆಸರು. ಕೆಂಪು ಚಂಡು ಮತ್ತು ಎದುರಾಳಿಯ ಚಂಡು ಗುರಿ ಚಂಡುಗಳು. ಆಟಗಾರ ದಂಡದಿಂದ ಕ್ಯೂ ಚಂಡಿಗೆ ಹೊಡೆಯಬೇಕು. ಕ್ಯೂಬಾಲ್ ಎರಡು ಗುರಿ ಚಂಡುಗಳಿಗೂ ತಗಲಿದರೆ ಎರಡು ಅಂಕ ದೊರೆಯುತ್ತದೆ. ಇದಕ್ಕೆ ಒಂದು ಕ್ಯಾನನ್ ಎನ್ನುವರು. ಬಿಲಿಯಡ್ರ್ಸ್ ಮೇಜಿನಲ್ಲಿ ಆರು ಚೀಲಗಳಿರುತ್ತವೆ. ಚೀಲಕ್ಕೆ ಚಂಡು ಬೀಳಿಸಿದರೆ ಅಂಕ ಗಳಿಸಬಹುದು. ಕೆಂಪು ಚಂಡಾದರೆ ಮೂರು, ಬಿಳಿಯ ಚಂಡಾದರೆ ಎರಡು ಅಂಕಗಳು ಸಿಗುವುವು. ಗುರಿ ಚಂಡುಗಳಿಗೆ ತಗಲುವಂತೆ ತನ್ನ ಕ್ಯೂಚಂಡಿನಿಂದ ಹೊಡೆಯುವುದು, ಕೆಂಪು ಚಂಡನ್ನು ಚೀಲಕ್ಕೆ ಬೀಳಿಸುವುದು, ಕೆಂಪು ಅಥವಾ ಬಿಳಿ ಚಂಡಿಗೆ ತಗಲಿಸಿ ತನ್ನ ಕ್ಯೂಚಂಡನ್ನು ಚೀಲಕ್ಕೆ ಬೀಳಿಸುವುದು ಆಟಗಾರ ಮಾಡುತ್ತಿರಬೇಕು. ಹೀಗೆ ಮಾಡುತ್ತಿದ್ದರೆ ಆಟಗಾರ ಎಷ್ಟು ಹೊತ್ತು ಬೇಕಾದರೂ ಆಡುತ್ತಿರಬಹುದು. ಇದು ತಪ್ಪಿದರೆ ಎರಡನೆಯ ಆಟಗಾರನ ಸರದಿ ಬರುತ್ತದೆ. 

	ಗೆಲ್ಲಂಕ ಎಣಿಸುವ ವಿಧಾನವಿದೆ. ಗುರಿ ಚಂಡಿಗೆ ತಾಕಿದ ಬಳಿಕ ಕ್ಯೂಚಂಡು ಚೀಲಕ್ಕೆ ಬಿದ್ದರೆ ಅಥವಾ ಕ್ಯೂಚಂಡು ಒಂದಾದ ಮೇಲೊಂದು ಗುರಿ ಚಂಡನ್ನು ತಾಕಿದರೆ ಗೆಲ್ಲಂಕ ಎಣಿಸುವುದು. ಕೆಂಪು ಚಂಡು ಚೀಲಕ್ಕೆ ಬಿದ್ದರೆ ಮತ್ತೆ ಅದನ್ನು ಮೇಜಿನ ಮೇಲಿರಿಸುತ್ತಾರೆ. ಆದರೆ ಬಿಳಿ ಚಂಡು ಹಾಗಲ್ಲ. ಅದು ಚೀಲಕ್ಕೆ ಬಿದ್ದ ಮೇಲೆ ಆಟಗಾರ ಕೆಂಪು ಚಂಡೊಂದನ್ನೇ ಗುರಿ ಚಂಡಾಗಿರಿಸಿಕೊಂಡು ಆಡಬೇಕಾಗುತ್ತದೆ. ಹೆಚ್ಚು ಗೆಲ್ಲಂಕ ಪಡೆದಾತ ಜಯಶಾಲಿ. ಆಟಕ್ಕೆ ಮೊದಲೇ ಗೆಲ್ಲಂಕ ಎಷ್ಟೆಂದು ನಿರ್ಧರಿಸಿ ಅಷ್ಟು ಆಗುವವರೆಗೂ ಆಡುತ್ತಿರುತ್ತಾರೆ. ಆಟದ ಅವಧಿಯನ್ನು ಗೊತ್ತುಪಡಿಸಿಕೊಂಡು ಅಷ್ಟರಲ್ಲಿ ಹೆಚ್ಚು ಅಂಕಗಳನ್ನು ಪಡೆದವರು ಜಯಶಾಲಿ ಎಂದು ಇಟ್ಟು ಕೊಳ್ಳುವರು. 

	ಬಿಲಿಯಡ್ರ್ಸ್ ಕೌಶಲದ ಆಟ. ದೃಷ್ಟಿ ಚುರುಕಾಗಿರಬೇಕು. ದಂಡ ಹಿಡಿಯುವ ಕೈ, ಚಂಡನ್ನು ಹೊಡೆಯುವಾಗ ಮೈಗಳ ಸಮನ್ವಯ ಸಾಧಿಸಿರಬೇಕಾಗಿರುತ್ತದೆ. ಹೊಡೆದ ಚಂಡಿನ ಚಲನೆ ಹೇಗಾಗುತ್ತದೆಂಬ ಮುನ್ನರಿವೂ ಇರಬೇಕು. 

	ಇಂಗ್ಲಿಷ್, ಅಮೆರಿಕನ್ ಮತ್ತು ಫ್ರೆಂಚ್ ಎಂಬುದಾಗಿ ಬಿಲಿಯಡ್ರ್ಸಿನಲ್ಲಿ ಬಗೆಗಳಿವೆ. ಅಮೆರಿಕನ್ ಬಿಲಿಯಡ್ರ್ಸಿನಲ್ಲಿ ಮೇಜಿಗೆ ಚೀಲ ಇರುವುದಿಲ್ಲ. ಕ್ಯೂಚಂಡು ಗುರಿ ಚಂಡುಗಳನ್ನು ತಾಗಿದಾಗ ಅಂಕ ಕೊಡುತ್ತಾರೆ. ಅಲ್ಲಿ ತ್ರಿಕುಷನ್ ಬಿಲಿಯಡ್ರ್ಸ್ ಹೆಚ್ಚು ಜನಪ್ರಿಯವಾಗಿದೆ. ಮೇಜಿನಲ್ಲಿ ಚೌಕಾಕಾರದ ಕುಷನುಗಳನ್ನು ಮಾಡಿರುತ್ತಾರೆ. ಇವು ಮೇಜಿನ ಅಂಚಿನಲ್ಲಿರುತ್ತವೆ. ಗುರಿ ಚಂಡುಗಳನ್ನು ತಾಗಿ ಕ್ಯೂಚಂಡು ಎಷ್ಟು ಕುಷನುಗಳನ್ನು ಮುಟ್ಟುತ್ತವೆ ಎಂಬುದು ಲೆಕ್ಕ.

	ಹದಿನಾರು ಚಂಡುಗಳಿರುವುದು ಪಾಕೆಟ್ ಬಿಲಿಯಡ್ರ್ಸಿನಲ್ಲಿ. ಒಂದು ಕ್ಯೂ ಚಂಡು ಉಳಿದವಕ್ಕೆ ಕ್ರಮವಾಗಿ ಒಂದರಿಂದ ಹದಿನೈದರವರೆಗೆ ಸಂಖ್ಯೆಗಳನ್ನು ಹಾಕಿರುತ್ತಾರೆ. ಹದಿನೈದು ಚಂಡುಗಳಲ್ಲಿ ಎಂಟನ್ನು ಚೀಲಗಳಿಗೆ ಬೀಳಿಸಿದವರು ಗೆದ್ದ ಹಾಗೆ. ಸಂಖ್ಯಾಕ್ರಮಾನುಸಾರ ಚಂಡುಗಳನ್ನು ಚೀಲಕ್ಕೆ ಬೀಳಿಸುವುದು ಇನ್ನೊಂದು ವಿಧ. ಚಂಡಿನ ಸಂಖ್ಯೆಗೆ ತಕ್ಕಹಾಗೆ ಗೆಲ್ಲಂಕ ಸಿಗುತ್ತದೆ. ಹದಿನೈದು ಚಂಡುಗಳಿಂದ ನೂರಿಪ್ಪತ್ತು ಅಂಕ ಆಗುತ್ತದೆ. ಆಟದಲ್ಲಿ 61 ಅಂಕ ಪಡೆದವರು ಗೆಲ್ಲುತ್ತಾರೆ. ಹೆಚ್ಚು ಗೆಲ್ಲಂಕ ಪಡೆಯಲು ಆಟಗಾರನಿಗೆ ಚಂಡಿನ ಮೇಲೆ ನಿಯಂತ್ರಣ ಇರಬೇಕಾದುದು ಅಗತ್ಯ. 

	ಬಿಲಿಯಡ್ರ್ಸಿನಿಂದ ಕೊಂಚ ಭಿನ್ನವಾದ ಆಟ ಸ್ನೂಕರ್. ಇಂತಹುದೇ ಇನ್ನೊಂದು ಆಟ ಬಿಗಾಟೆಲ್. ಇದರ ಆಟದ ಮೇಜು ದೊಡ್ಡ ಅಳತೆಯದು.											

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ